ಉಪವಾಸ, ಪೂಜೆ, ಜಾಗರಣೆ ಇವು ಮಹಾಶಿವರಾತ್ರಿಯ ವಿಶೇಷತೆಗಳು: ಯೋಗತಜ್ಞ ಡಾ|| ರಾಘವೇಂದ್ರ ಗುರೂಜಿ

ದಾವಣಗೆರೆ ಫೆ.19: ಉಪವಾಸ, ಪೂಜೆ ಮತ್ತು ಜಾಗರಣೆ ಇವು ತ್ರಿವಿಧಗಳಿಂದ ಕೂಡಿದ ಮೂರು ಅಂಗಗಳು.
ಮಹಾಶಿವರಾತ್ರಿಯ ವಿಶೇಷತೆಗಳಾಗಿವೆ. ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿಯ ಉತ್ತರಾಯಣ ಪುಣ್ಯಕಾಲದಲ್ಲಿ
ಜಗತ್ತಿನಾದ್ಯಂತ ಆಚರಿಸಲ್ಪಡುವ ಮಹಾಶಿವರಾತ್ರಿಯು ಶಿವಭಕ್ತರ ಪಾಲಿಗೆ ಮಂಗಳಕರವಾದ ದಿನವಾಗಿದೆ ಎಂದು
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಯೋಗ ತಜ್ಞ, ಯೋಗಗುರು ಡಾ|| ರಾಘವೇಂದ್ರ ಗುರೂಜಿ ಹೇಳಿದರು.
ಅವರು ಮಹಾಶಿವರಾತ್ರಿಯ ಪ್ರಯುಕ್ತ ನಗರದ ದೇವರಾಜ್ ಅರಸ್ ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ
ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗಚಿಕಿತ್ಸಾ
ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ “ಶಿವಮಾನಸ ಧ್ಯಾನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಮಾತನಾಡಿದರು.

ಮಹಾಶಿವರಾತ್ರಿಯ ದಿನ ಶಿವತತ್ವವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.
ಶಿವತತ್ವದ ಲಾಭವು ಹೆಚ್ಚಿನ ಪ್ರಮಾಣದಲ್ಲಿ ಸಿಗಲು ಈ ದಿನ ಭಾವಪೂರ್ಣವಾಗಿ ಶ್ರದ್ಧಾಭಕ್ತಿಯಿಂದ ಶಿವನಪೂಜೆ, ಅರ್ಚನೆ

ಮಾಡಬೇಕು ಮತ್ತು “ಓಂ ನಮಃ ಶಿವಾಯಃ’ ಎಂಬ ಶಿವ ಪಂಚಾಕ್ಷರಿ ನಾಮಜಪವನ್ನು ಹೆಚ್ಚು ಮಾಡಬೇಕು. ಹೀಗೆ
ಮಾಡುವುದರಿಂದ ಶಿವನ ಸೂಕ್ಷ್ಮಶಕ್ತಿಯು ನಮಗೆ ಲಭಿಸುತ್ತದೆ. ಶರೀರದ ಆವಯವಗಳು ಚೈತನ್ಯಗೊಂಡು ಮನಸ್ಸು
ಪ್ರಫುಲ್ಲಗೊಳ್ಳುವುದು.

ಶಿವರಾತ್ರಿಯಂದು ಉಪವಾಸ, ಜಾಗರಣೆ ಮತ್ತು ಪೂಜೆ ಇವುಗಳನ್ನು ಶ್ರದ್ಧಾ ಭಕ್ತಿಯಿಂದ
ಆಚರಿಸುವುದು ಅತ್ಯಂತ ಶ್ರೇಷ್ಠವಾದುದು. ಜಾಗೃತವಾದ ಮನಸ್ಸಿನಿಂದ ಸದಾಶಿವನ ನಾಮಸ್ಮರಣೆಯೊಂದಿಗೆ
ಶಿವನಸಾನ್ನಿಧ್ಯದಲ್ಲಿ ಸಾಮಿಪ್ಯವವನ್ನು ಹೊಂದಿ ಭಕ್ತಿಭಾವದಿಂದ ಬಿಲ್ವಪತ್ರೆ ಅರ್ಚನೆ, ಭಜನೆ, ಕೀರ್ತನೆ,
ಸಂಗೀತವನ್ನು ಆಲಿಸುತ್ತಾ ರಾತ್ರಿ ಕಳೆದು, ಬೆಳಗಿನ ಜಾವದ ವರೆಗೆ ಸರ್ವಾಂತರ್ಯಾಮಿ ಮಹಾಯೋಗಿ
ಈಶ್ವರನನ್ನು ಆರಾಧಿಸುವುದು ಈ ಮಹಾಶಿವರಾತ್ರಿಯ ವಿಶೇಷತೆಯಾಗಿದೆ ಎಂದು ಶಿವರಾತ್ರಿಯ ಮಹಿಮೆಯನ್ನು
ತಿಳಿಸಿದರು.

ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮ ಶಂಕನಾದದೊಂದಿಗೆ ನೆರವೇರಿಸಲಾಯಿತು. ನಂತರ
‘ಶಿವಮಾನಸ ಧ್ಯಾನ’ದ ಅಭ್ಯಾಸವನ್ನು ಶ್ರೀ ಗುರೂಜಿಯವರು ಹೇಳಿಕೊಟ್ಟರು. ತದನಂತರ ‘ಓಂ
ನಮಃ ಶಿವಾಯಃ’ ಎಂಬ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸುತ್ತಾ ಶಿವಧ್ಯಾನವನ್ನು ಹೇಳಿಕೊಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ವಿಶ್ವನಾಥಯ್ಯ ಕೆ.ಎಂ., ಅಂಚೆ ಇಲಾಖೆಯ ಶ್ರೀಮತಿ ವೇದಾವತಿ, ಸಮಾಜ ಕಲ್ಯಾಣ
ಇಲಾಖೆಯ ಸಂತೋಷ್ ಹೆಚ್. ಮತ್ತು ಭರತ್ ವಡೋನಿ, ಗುರುಪ್ರಸಾದ್ ಎಸ್., ಶ್ರೀಮತಿ ಶ್ರೀದೇವಿ, ಕುಮಾರಿ
ಭ್ರಮರಾಂಭಿಕ ಇನ್ನಿತರರು ಭಾಗವಹಿಸಿದ್ದರು. ಕೊನೆಯಲ್ಲಿ ಶಾಂತಿಮಂತ್ರದೊಂದಿಗೆ ಮಹಾಶಿವರಾತ್ರಿಯ
ವಿಶೇಷ ಶಿವಧ್ಯಾನ ಕಾರ್ಯಕ್ರಮವು ಸಂಪನ್ನಗೊಂಡಿತು.

Leave a Reply

Your email address will not be published. Required fields are marked *

error: Content is protected !!