ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಕಾವಲು ಸಭೆಯಲ್ಲಿ ಸಿಇಒ ಸೂಚನೆ

ನಮ್ಮ ದಾವಣಗೆರೆ,ಡಿ.21: ಮಗುವನ್ನು ಎತ್ತಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆಯರ ಬಗ್ಗೆ ಕೂಲಕುಂಷವಾಗಿ ಪರಿಶೀಲನೆ ನಡೆಸಿ, ಮಗು ನೈಜವಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆಯದೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ ಚೆನ್ನಪ್ಪ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬುಧವಾರ ನಡೆದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಕಾವಲು ಸಮಿತಿ ಸಭೆ ಹಾಗೂ ಸಾಂತ್ವನ , ಸ್ತ್ರೀ ಶಕ್ತಿ ಯೋಜನೆ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಹಲವಾರು ಮಹಿಳೆಯರು ಭಿಕ್ಷಾಟನೆಯಲ್ಲಿ ತೊಡಗಿರುವುದು ಸರ್ವೇ ಸಾಮಾನ್ಯವಾಗಿದ್ದು, ಆ ಪುಟ್ಟ ಮಕ್ಕಳ ನೈಜ್ಯ ಪೋಷಕರು ಅವರುಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಹಾಗೂ ಮಕ್ಕಳ ವಿಷಯದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು ಈ ಮಾಹಿತಿ ಕಲೆ ಹಾಕಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಾಸಂತಿ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ 04 ಕಾವಲು ಸಮಿತಿಯನ್ನು ರಚಿಸಲಾಗಿದ್ದು, ಅಕ್ರಮವಾಗಿ ಸಾಗಾಣಿಕೆ ಮಾಡಿರುವ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ತಿಳಿಸಿದರು.

ಸಹಾಯವಾಣಿ ಪ್ರಚಾರ: ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಹಾಗೂ ಮಕ್ಕಳ ನೆರವಿಗೆ ಧಾವಿಸುವ ಸಹಾಯವಾಣಿ, ಸಾಂತ್ವನ ಕೇಂದ್ರ ಸೇರಿದಂತೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗೆಗೆ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವಂತೆ ಸೂಚನೆ ನೀಡಿದರು.

ಕೌಟುಂಬಿಕ ಕಲಹ, ವರದಕ್ಷಿಣೆ, ಲೈಂಗಿಕ ಕಿರುಕುಳ, ಮಹಿಳೆಯರ ಮತ್ತು ಮಕ್ಕಳ ಸಾಗಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಾನೂನುಗಳನ್ನು ರೂಪಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ನೆರವಿಗೆ ಸ್ವಯಂ ಸೇವಾ ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿರುವ ಸಾಂತ್ವನ, ಮಹಿಳಾ ಸಹಾಯವಾಣಿ ಕೇಂದ್ರಗಳ ಮಾಹಿತಿಯನ್ನು ಹೆಚ್ಚು ಪ್ರಚಾರಮಾಡಬೇಕು ಎಂದರು.

ಮಹಿಳಾ ರಕ್ಷಣೆಗೆ ಆದ್ಯತೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಪ್ರತಿಕ್ರಿಯಿಸಿ, ಮಹಿಳೆಯರ ನೆರವಿಗಾಗಿ ಈಗಾಗಲೇ ಕರಪತ್ರ, ಪ್ರದರ್ಶನ ಫಲಕಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ನೀಡಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಪ್ರಚಾರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದೇವೆ. ಹಾಗೂ ಪ್ರಕರಣಗಳು ದಾಖಲಾದಾಗ ಆಯಾ ಹಿರಿಯರು, ಪ್ರಕರಣದಲ್ಲಿ ಭಾಗಿಯಾದವರನ್ನು ಕರೆಯಿಸಿ ಆಪ್ತ ಸಮಾಲೋಚನೆ ಸಂಧಾನದ ಮೂಲಕ ಇತ್ಯರ್ಥ ಮಾಡಲು ಪ್ರಯತ್ನಿಸುತ್ತಿದ್ದೇವೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದಾರೆ ಮುಂದಿನ ಕ್ರಮಕ್ಕೆ ಸಾಂತ್ವನ ಕೇಂದ್ರಗಳಿಗೆ ಶಿಫಾರಸು ಮಾಡುತ್ತೇವೆ. ಯಾವುದೇ ಅನ್ಯಾಯಕ್ಕೆ ಅವಕಾಶವಾಗದಂತೆ ಮಹಿಳೆಯರಿಗೆ ರಕ್ಷಣೆ, ಪರಿಹಾರ ಲಭಿಸಲು ಅವಶ್ಯವಿರುವ ಎಲ್ಲಾ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

346 ಮಹಿಳೆಯರಿಗೆ ಕೌಟುಂಬಿಕ ಸಲಹೆ: ಮುಂದುವರೆದು ಸಾಂತ್ವನ ಯೋಜನೆಯಡಿ ಜಗಳೂರು ತಾಲ್ಲೂಕಿನಲ್ಲಿ 68, ಚನ್ನಗಿರಿ 73, ಹರಿಹರ 81, ಹೊನ್ನಾಳಿ 124 ಚನ್ನಗಿರಿ ಸೇರಿದಂತೆ ಒಟ್ಟು 346 ಮಹಿಳೆಯರು ಕೌಟುಂಬಿಕ ಸಲಹೆ ಪಡೆದುಕೊಂಡಿದ್ದು, ಈ ಪೈಕಿ ಹರಿಹರ ತಾಲ್ಲೂಕಿನ 6 ಮಹಿಳೆಯರಿಗೆ ಆರ್ಥಿಕ ಪರಿಹಾರ ದೊರಕಿದೆ. ಅದರಲ್ಲಿ ಹೊನ್ನಾಳಿಯ ಇಬ್ಬರಿಗೆ ಉದ್ಯೋಗ ಲಭಿಸಿದೆ. ಒಟ್ಟು ಸಾಂತ್ವನ ಯೋಜನೆಯಡಿ ಒಟ್ಟು 178 ಜನರು ವಿವಿಧ ಸೌಲಭ್ಯ ಅಥವಾ ಪರಿಹಾರವನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಂತ್ವನ ಯೋಜನೆಯಡಿ ಜಗಳೂರು ತಾಲ್ಲೂಕಿನಲ್ಲಿ 72 ಕೇಸ್ ದಾಖಲಾಗಿದ್ದು 69 ಕೇಸ್‍ಗಳು ಇತ್ಯರ್ಥಗೊಂಡಿವೆ. ಇನ್ನೂ 4 ಕೇಸ್‍ಗಳು ಬಾಕಿ ಉಳಿದಿವೆ. ಚನ್ನಗಿರಿಯಲ್ಲಿ 119 ಕೇಸ್ ದಾಖಲಾಗಿದ್ದು 118 ಕೇಸ್‍ಗಳು ಇತ್ಯರ್ಥವಾಗಿದೆ. 1 ಕೇಸ್‍ಗಳು ಬಾಕಿ ಉಳಿದಿದೆ. ಹರಿಹರದಲ್ಲಿ 64 ಕೇಸ್ ದಾಖಲಾಗಿದ್ದು 59 ಕೇಸ್ ಇತ್ಯರ್ಥವಾಗಿದೆ. 5 ಕೇಸ್ ಬಾಕಿ ಉಳಿದಿದೆ. ಹೊನ್ನಾಳಿಯಲ್ಲಿ 88 ಕೇಸ್ ದಾಖಲಾಗಿದ್ದು, 84 ಕೇಸ್ ಇತ್ಯರ್ಥಗೊಂಡಿದೆ. 04 ಕೇಸ್ ಬಾಕಿ ಉಳಿದಿದೆ ಎಂದು ವಿವರಿಸಿದರು.

ಸಭೆಯಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಲೀಡ್ ಬ್ಯಾಂಕ್ ಮ್ಯಾನೇಜ್‍ರ್ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆಯ ಉಪನಿದೇಶಕ ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

error: Content is protected !!