ಟೀವಿಯಿಂದ ಡಿಜಿಟಲ್ ಕಡೆಗೆ ಐಪಿಎಲ್ ಪ್ರಮುಖ ಜಾಹೀರಾತುದಾರರು.

ಈ ಐಪಿಎಲ್ ಋತುವಿನಲ್ಲಿ ಹೊಸ ಟ್ರೆಂಡ್ ಕಂಡುಬಂದಿದೆ. ಜಾಹೀರಾತುದಾರರು ಟೀವಿಯನ್ನು ಬಿಟ್ಟು ಡಿಜಿಟಲ್ ಕಡೆ ಮುಖ ಮಾಡುತ್ತಿದ್ದಾರೆ. ಬಾರ್ಕ್ ಇಂಡಿಯಾದ ಟೀವಿ ರೇಟಿಂಗ್‌ನಲ್ಲಿ, ಕಳೆದ ವರ್ಷ ಮೊದಲ ಪಂದ್ಯದಲ್ಲಿ ಸುಮಾರು 52 ಜಾಹೀರಾತುದಾರರು ಟಿವಿಯಲ್ಲಿ ಜಾಹೀರಾತುಗಳನ್ನು ನೀಡಿದ್ದರು. ಈ ವರ್ಷ ಕೇವಲ 31 ಜಾಹೀರಾತುದಾರರು ಕಾಣಿಸಿಕೊಂಡರು. ಅಂದರೆ ಶೇ 40ರಷ್ಟು ಜಾಹೀರಾತುದಾರರು ಟೀವಿ ಜಾಹೀರಾತು ಪ್ರಸಾರದಿಂದ ವಿಮುಖರಾಗಿದ್ದಾರೆ.

ಕಳೆದ ಐಪಿಎಲ್ ಋತುವಿನಲ್ಲಿ ಟೀವಿ ಜಾಹೀರಾತುದಾರರ ಸಂಖ್ಯೆ ಸುಮಾರು 100 ಆಗಿತ್ತು. ಈ ಬಾರಿ 100 ಜಾಹೀರಾತುದಾರರ ಅಂಕಿಯನ್ನು ಮುಟ್ಟಲು ಸಾಧ್ಯವಾಗಬಹುದಾ ಅಂತ ನೋಡಿದಲ್ಲಿ, ಇದು ತುಂಬಾ ಕಷ್ಟಕರವೆಂದು ತೋರುತ್ತದೆ. ಟಿವಿಯಲ್ಲಿ ಪ್ರಾಯೋಜಕರ ಸಂಖ್ಯೆಯೂ ಕಡಿಮೆಯಾಗಿದೆ. ಕಳೆದ ವರ್ಷ ಇದ್ದ 16 ರಿಂದ ಈ ವರ್ಷ 12 ಕ್ಕೆ ಇಳಿದಿದೆ. ಈ 12ರಲ್ಲಿ ಒಬ್ಬ ಪ್ರಾಯೋಜಕರು ಮೂರನೇ ಪಂದ್ಯದೊಂದಿಗೆ ತಳುಕು ಹಾಕಿಕೊಂಡಿದ್ದಾರೆ.

ರಿಲಯನ್ಸ್‌ಗೆ ಸಂಬಂಧಿಸಿದ ಕಂಪನಿಗಳು ಜಾಹೀರಾತುದಾರರ ಪಟ್ಟಿಯಿಂದ ಸಂಪೂರ್ಣವಾಗಿ ಕಾಣೆಯಾಗಿವೆ. ಕಾರಣ ರಿಲಯನ್ಸ್ ಗ್ರೂಪ್‌ನ ವಯಾಕಾಮ್-18 ಐಪಿಎಲ್‌ನ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಬೈಜೂಸ್, ಕ್ರೆಡ್, ಮುತ್ತೂಟ್, ನೆಟ್‌ಮೆಡ್ಸ್, ಸ್ವಿಗ್ಗಿ, ಫ್ಲಿಪ್‌ಕಾರ್ಟ್, ಫೋನ್‌ಪೇ, ಮೀಶೋ, ಸ್ಯಾಮ್‌ಸಂಗ್, ಒನ್‌ಪ್ಲಸ್, ವೇದಾಂಟು, ಸ್ಪಾಟಿಫೈ ಮತ್ತು ಹ್ಯಾವೆಲ್ಸ್ ಇವು ಟೀವಿಯಿಂದ ವಿಮುಖವಾದ ಇತರ ದೊಡ್ಡ ಟಿವಿ ಜಾಹೀರಾತುದಾರರು. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಟಿವಿಯಲ್ಲಿ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತಿದೆ.

ಟಿವಿ ಜಾಹೀರಾತು ಆದಾಯದ ಪ್ರಮುಖ ಭಾಗವನ್ನು ಡಿಜಿಟಲ್ ಆವರಿಸಿಕೊಂಡಿದೆ. 125ಕ್ಕೂ ಹೆಚ್ಚು ಜಾಹೀರಾತುದಾರರು ಟಿವಿಯನ್ನು ದಾಟಿ ಡಿಜಿಟಲ್ ಜಾಹೀರಾತಿಗಾಗಿ ವಯಾಕಾಮ್-18 ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಅಮೆಜಾನ್, ಫೋನ್ ಪೇ, ಸ್ಯಾಮ್‌ಸಂಗ್, ಜಿಯೋಮಾರ್ಟ್, ಯುಬಿ, ಟಿವಿಎಸ್, ಕ್ಯಾಸ್ಟ್ರಾಲ್, ಇಟಿ ಮನಿ, ಪೂಮಾ, ಅಜಿಯೋನಂತಹ ಕಂಪನಿಗಳು ಸೇರಿವೆ.

ಟಿವಿಯಲ್ಲಿ ಜಾಹೀರಾತುದಾರರು ಕಡಿಮೆಯಾಗುತ್ತಿದ್ದು, ಇದು ಟಿವಿ ಪ್ರಸಾರಕರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಐಪಿಎಲ್ ಆದಾಯದ ಸಂಪೂರ್ಣ ಅಂಕಿ- ಅಂಶಗಳೊಂದಿಗೆ ಹೊರಬರಲು ಇನ್ನೂ ಸಮಯವಿದೆ, ಐಪಿಎಲ್ ಮುಂದುವರಿದಂತೆ ಚಿತ್ರಣವು ಹೆಚ್ಚು ಸ್ಪಷ್ಟವಾಗುತ್ತದೆ.

ಭಾರತದಲ್ಲಿ ವಯಾಕಾಮ್-18 ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ಐಪಿಲ್ 2023 ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತಿದೆ. ಒಟ್ಟು 20,500 ಕೋಟಿ ರೂಪಾಯಿಗೆ ವಯಾಕಾಮ್-18 ಭಾರತದಲ್ಲಿ ಡಿಜಿಟಲ್ ನೇರ ಪ್ರಸಾರ ಪಂದ್ಯಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಜಿಯೋ ಚಂದಾದಾರಿಕೆ ಹೊಂದಿರುವ ಎಲ್ಲ ಟೆಲಿಕಾಂ ಪೂರೈಕೆದಾರರ ಬಳಕೆದಾರರು ಉಚಿತವಾಗಿ ಜಿಯೋ ಸಿನಿಮಾ ಅಪ್ಲಿಕೇಷನ್‌ಗೆ ಲಾಗ್ ಇನ್ ಮಾಡುವ ಮೂಲಕ ಐಪಿಎಲ್ ಪಂದ್ಯಗಳನ್ನು ಆನಂದಿಸಬಹುದು.

Leave a Reply

Your email address will not be published. Required fields are marked *

error: Content is protected !!